ಸಂಘ ದೇಶಕ್ಕೆ ಏನು ನೀಡಿದೆ?
ಸೇವೆ ಹಾಗೂ ನಿಸ್ವಾರ್ಥತೆಗೆ ಉತ್ತಮ ಉದಾಹರಣೆಯೆಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದರ ಸ್ಥಾಪನೆಯಾಗಿದ್ದು ೧೯೨೫ರಲ್ಲಿ. ಸಂಘಸಂಸ್ಥಾಪಕರು ಡಾ.ಕೇಶವ ಬಲಿರಾಮ ಹೆಡಗೆವಾರ್. ವಿಶ್ವದ ಅತಿದೊಡ್ಡ ಸಂಘಟನೆಯೆಂಬ ಹೆಗ್ಗಳಿಕೆ ಸಂಘದ್ದು. ಅನೇಕ ಆರೋಪ, ಅವಮಾನಗಳನ್ನು ಎದುರಿಸಿದರೂ “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಎಂಬ ರಾಷ್ಟ್ರಸೇವೆಯ ಪರಿಕಲ್ಪನೆಯಲ್ಲಿ ಮಾತೃಭೂಮಿಯನ್ನು ಗೌರವಿಸುತ್ತಾ, ದೇಶಪ್ರೇಮವನ್ನು ಜನಸಾಮಾನ್ಯರಲ್ಲಿ ತುಂಬುತ್ತ, ಕಣಕಣದಲ್ಲಿ ಸೇವೆ ಹಾಗೂ ನಿಸ್ವಾರ್ಥತೆಯ ಗುಣಗಳನ್ನು ಅಳವಡಿಸಿಕೊಂಡು, ಸಮಗ್ರ ಭಾರತದ ಏಕತೆಗೆ ಶ್ರಮಿಸುತ್ತಿರುವ ಏಕೈಕ ಸಂಘಟನೆಯೆಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ದೇಶಕ್ಕೆ ಸಂಘ ನೀಡಿದ ಕೊಡುಗೆಯೇನು..? ಎಂಬುದು ಹಲವು ಸ್ವಘೋಷಿತ ವಿಚಾರವಾದಿಗಳ, ಬುದ್ಧಿಜೀವಿಗಳ ಪ್ರಶ್ನೆಯಾಗಿರಬಹುದು. ದೇಶಕ್ಕೆ ಸಂಘ ನೀಡಿದ ಕೊಡುಗೆಯೇನೆಂಬುದನ್ನು ಒಂದು ಚಿಕ್ಕ ಲೇಖನದಲ್ಲಿ ಹೇಳಲು ಸಾಧ್ಯವಿಲ್ಲ. ಆದರೂ ಸಂಶೋಧನೆಯಲ್ಲೇ ಸದಾ ಕಾಲಕಳೆಯುವ ವಿಚಾರವಾದಿಗಳಿಗೆ ಸಮಯಾಭಾವವಿರುವುದರಿಂದ (?) ಈ ಚಿಕ್ಕ ಲೇಖನ..!! ಸಂಘದ ಬಗ್ಗೆ ಇಷ್ಟನ್ನಾದರೂ ಒದಿಕೊಳ್ಳಿ..!!
ಅಕ್ಟೋಬರ್ ೧೯೪೭ರಂದು ಕಾಶ್ಮೀರಸೀಮೆಯನ್ನು ಕಾಯುತ್ತಾ, ಪಾಕಿಸ್ತಾನದ ಚಲನವಲನಗಳನ್ನು ನಿರೀಕ್ಷಿಸುತ್ತಾ, ಪಾಕಿಸ್ತಾನದ ಸೇನಾ ತುಕುಡಿಗಳು ಕಾಶ್ಮೀರವನ್ನು ಪ್ರವೇಶಿಸಿದಂತೇ ತಡೆದವರು ಇದೇ ಸ್ವಯಂ ಸೇವಕರು..!! ಅಂದು ಮಾತೃಭೂಮಿಯ ರಕ್ಷಣೆಗಾಗಿ ಹಲವು ಸ್ವಯಂ ಸೇವಕರು ಪ್ರಾಣವನ್ನೇ ತ್ಯಜಿಸಿದರು. ಭಾರತ ವಿಭಜನೆಯ ನಂತರ ದೇಶದಲ್ಲಿ ಹಲವಾರು ದಂಗೆಗಳಾದವು. ಅವುಗಳನ್ನು ನಿಯಂತ್ರಿಸಲು ನೆಹರೂ ಸರ್ಕಾರ ಅಸಮರ್ಥವಾಗಿತ್ತು. ಪಾಕಿಸ್ತಾನದಿಂದ ಪ್ರಾಣವನ್ನು ಉಳಿಸಿಕೊಂಡು ಬಂದ ಹಲವಾರು ಜನರಿಗೆ ರಕ್ಷಣೆ ನೀಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಮಾರು ೩೦೦೦ಕ್ಕಿಂತಲೂ ಹೆಚ್ಚಿನ ಶಿಬಿರಗಳನ್ನು ಗಡಿಯಲ್ಲಿ ಸ್ಥಾಪಿಸಿತ್ತು.
೧೯೬೨ರ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೇ ರಾಷ್ಟೀಯ ಸ್ವಯಂ ಸೇವಕ ಸಂಘ. ದೇಶದ ಮೂಲೆಮೂಲೆಗಳಿಂದ ಬಂದ ಸ್ವಯಂಸೇವಕರು ಗಡಿಯಲ್ಲಿ ಜಮಾಯಿಸಿ, ಭಾರತೀಯ ಸೈನಿಕರ ಸಹಾಯಕ್ಕೆ ನಿಂತರು. ಈ ಯೋಗದಾನವನ್ನರಿತ ನೆಹರೂ ೧೯೬೩ರ ಜನವರಿ ೨೬ರ ಪರೇಡಿಗೆ ಸ್ವಯಂಸೇವಕರನ್ನು ಆಹ್ವಾನಿಸಿದರು. ಪರೇಡಿನಲ್ಲಿ ಭಾಗವಹಿಸುವ ತಂಡಗಳು ಇಂದಿಗೂ ಹಲವು ದಿನಗಳ ಕಾಲ ಅಭ್ಯಾಸ ನಡೆಸಬೇಕಾಗುತ್ತದೆ. ಆದರೆ ಎರಡು ದಿನ ಮುಂಚಿತವಾಗಿ ಆಹ್ವಾನವನ್ನು ಸ್ವೀಕರಿಸಿದರೂ ಸುಮಾರು ೩೫೦೦ ಸ್ವಯಂಸೇವಕರು ಗಣವೇಶದಲ್ಲಿ ಪರೇಡಿನಲ್ಲಿ ಭಾಗಿಯಾಗಿ ರಾಷ್ಟ್ರೀಯ ಸ್ವಯಂ ಸೇವಕಸಂಘದ ಶಿಸ್ತನ್ನು ಪ್ರದರ್ಶಿಸಿದರು.
ಕಾಶ್ಮೀರವನ್ನು ಭಾರತ ಗಣರಾಜ್ಯದಲ್ಲಿ ವಿಲೀನಗೊಳಿಸುವ ಸಂದರ್ಭದಲ್ಲೂ ಸಂಘದ ಪಾತ್ರ ಹಿರಿದು. ಕಾಶ್ಮೀರದ ರಾಜ ಹರಿಸಿಂಹ ಕಾಶ್ಮೀರವನ್ನು ವಿಲೀನಗೊಳಿಸುವ ಬಗ್ಗೆ ಯಾವ ನಿರ್ಧಾರವನ್ನೂ ಕೈಗೊಂಡಿರಲಿಲ್ಲ. ಅತ್ತ ಪಾಕಿಸ್ತಾನ ಗಡಿಯೊಳಗೆ ಅಧಿಪತ್ಯ ಸ್ಥಾಪಿಸುವ ಹುನ್ನಾರ ನಡೆಸುತ್ತಿತ್ತು. ನೆಹರೂ ಸರ್ಕಾರ ತಟಸ್ಥ ನೀತಿಯನ್ನು ಅನುಸರಿಸಿತ್ತು. ಆಗ ಸರ್ದಾರ್ ವಲ್ಲಭಬಾಯಿ ಪಟೇಲ್ ಗುರೂಜಿ ಗೊಳ್ವಲ್ಕರ್ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದರು. ಗೊಳ್ವಲ್ಕರರು ಶ್ರೀನಗರಕ್ಕೆ ಧಾವಿಸಿ ರಾಜ ಹರಿಸಿಂಹನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆಮೇಲೆ ರಾಜ ಹರಿಸಿಂಹ ಕಾಶ್ಮೀರವನ್ನು ಭಾರತಗಣತಂತ್ರದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದರು.
೧೯೬೫ರ ಯುದ್ಧದಲ್ಲೂ ಸಂಘ ಮಹತ್ವದ ಭೂಮಿಕೆಯನ್ನು ನಿಭಾಯಿಸಿತ್ತು. ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಕಾನೂನು ಸುವ್ಯವಸ್ಥೆಗಾಗಿ ಸ್ವಯಂ ಸೇವಕರನ್ನು ಆಹ್ವಾನಿಸಿದ್ದರು. ಕಾನೂನು ಸುವ್ಯವಸ್ಥೆಯನ್ನು ಸ್ವಯಂ ಸೇವಕರು ಪಾಲಿಸಿದರೆ ಪೋಲಿಸರು ಸೈನ್ಯದೊಂದಿಗೆ ಗಡಿಯಲ್ಲಿ ಹೊರಾಡಿದರು. ಯುದ್ಧದಲ್ಲಿ ಗಾಯಾಳುಗಳಾದ ಸೈನಿಕರಿಗೆ ರಕ್ತದಾನ ಮಾಡಿದ್ದು ಸ್ವಯಂಸೇವಕರೇ..!!
ದಾದ್ರಾ, ನಗರ ಹವೇಲಿ, ಗೋವಾ ಮುಂತಾದ ರಾಜ್ಯಗಳನ್ನು ಭಾರತಗಣತಂತ್ರದೊಂದಿಗೆ ವಿಲೀನಗೊಳಿಸಿದ ಕೀರ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೇ ಸಲ್ಲುತ್ತದೆ. ೨೧ ಜುಲೈ ೧೯೫೪ ಪೋರ್ಚುಗೀಸರಿಂದ ದಾದ್ರಾ, ೨೮ ಜುಲೈ ೧೯೫೪ ರಂದು ನರೋಲಿಗಳನ್ನು ವಿದೇಶಿಯರ ಆಳ್ವಿಕೆಯಿಂದ ಮುಕ್ತಗೊಳಿಸಲಾಯಿತು. ೨ ಅಗಸ್ಟ್ ೧೯೫೪ರಂದು ಪೋರ್ಚುಗಲ್ಲಿನ ಧ್ವಜವನ್ನು ಕಿತ್ತೆಸೆದು ತ್ರಿವರ್ಣಧ್ವಜವನ್ನು ಹಾರಿಸಿದ ಕೀರ್ತಿ ಸ್ವಯಂ ಸೇವಕರಿಗೇ ಸಲ್ಲುತ್ತದೆ. ಸಂಪೂರ್ಣ ದಾದ್ರಾ. ನಗರ ಹವೇಲಿ ಪ್ರಾಂತ್ಯಗಳನ್ನು ಪೋರ್ಚುಗೀಸರ ಆಡಳಿತದಿಂದ ತಪ್ಪಿಸಿ ಭಾರತ ಸರ್ಕಾರಕ್ಕೊಪ್ಪಿಸಿದ ಯಶಸ್ಸು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸಲ್ಲುತ್ತದೆ. ಗೋವಾ ಪ್ರಾಂತ್ಯದ ವಿಲೀನ ಸಂದರ್ಭದಲ್ಲೂ ನೆಹರೂ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಶ್ರೀ ಜಗನ್ನಾಥ ರಾವ್ ಜೋಶಿಯವರ ಮುಂದಾಳತ್ವದಲ್ಲಿ ಸ್ವಯಂಸೇವಕರು ಆಂದೋಲನವನ್ನು ಪ್ರಾರಂಭಿಸಿದರು. ಸ್ವಯಂ ಸೇವಕರು ಕಠಿಣ ಶಿಕ್ಷೆಗೊಳಗಾದರೂ ಆಂದೋಲನವನ್ನು ಕೈಬಿಡಲಿಲ್ಲ. ಸ್ವಯಂಸೇವಕರ ಸತತ ಪರಿಶ್ರಮದಿಂದ ೧೯೬೧ರಲ್ಲಿ ಗೋವಾ ಭಾರತಗಣತಂತ್ರದೊಂದಿಗೆ ವಿಲೀನವಾಯಿತು.
೧೯೭೫ ರಿಂದ ೧೯೭೭ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಸಂಘದ ಸಾಧನೆ ಹಿರಿದು. ತುರ್ತುಪರಿಸ್ಥಿತಿಯ ವಿರುದ್ಧ ಸಂಘದ ಸತ್ಯಾಗ್ರಹ ಆರಂಭಗೊಂಡಿತ್ತು. ಹಲವಾರು ಸ್ವಯಂಸೇವಕರನ್ನು ಜೈಲಿಗೆ ತಳ್ಳಲಾಗಿತ್ತು. ಆದರೂ ತೆರೆಮರೆಯ ಹಿಂದೆಯೇ ಸಂಘದ ಕಾರ್ಯಗಳು ನಡೆಯುತ್ತಿದ್ದವು. ತುರ್ತುಪರಿಸ್ಥಿತಿಯ ವಿರುದ್ಧ ಜನರನ್ನು ಜಾಗೃತಿಗೊಳಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಜೈಲಿನಲ್ಲಿರುವ ಹಲವು ನಾಯಕರನ್ನು ಕೂಡಿಸಿ ಪರ್ಯಾಯ ಪಕ್ಷರಚನೆಗೆ ಸ್ವಯಂಸೇವಕ ಸಂಘ ಮುಂದಾಯಿತು.
೧೯೭೧ರ ಒರಿಸ್ಸಾ ಚಂಡಮಾರುತ, ಭೋಪಾಲ್ ಗ್ಯಾಸ್ ದುರಂತ,೧೯೮೪ರ ಸಿಖ್ ವಿರೋಧಿ ದಂಗೆ, ಗುಜರಾತಿನಲ್ಲಿ ಸಂಭವಿಸಿದ ಭೂಕಂಪ, ಸುನಾಮಿ, ಉತ್ತರಾಖಂಡದ ಪ್ರವಾಹ, ಕಾರ್ಗಿಲ್ ಯುದ್ಧ, ಚೆನ್ನೈ ಪ್ರವಾಹ ಮುಂತಾದ ರಾಷ್ಟ್ರೀಯ ವಿಪತ್ತಿನ ಸಂದರ್ಭಗಳಲ್ಲಿ ಸಂಘ ತನ್ನ ನಿಸ್ವಾರ್ಥಸೇವೆಯನ್ನು ಸಲ್ಲಿಸಿದೆ. ಕೇವಲ ಭಾರತದಲ್ಲಷ್ಟೇ ಅಲ್ಲ, ನೇಪಾಳ, ಶ್ರೀಲಂಕಾ, ಸುಮಾತ್ರಾ ಮುಂತಾದ ವಿದೇಶಗಳ ತುರ್ತುಪರಿಸ್ಥಿತಿಯಲ್ಲೂ ಸಂಘ ಪರಿಹಾರಕಾರ್ಯವನ್ನು ನಡೆಸಿದೆ. ಇಂದು ದೇಶದಲ್ಲಿ ಯಾವುದೇ ವಿಪತ್ತು ಸಂಭವಿಸಿದರೂ ಸಂಘ ಸಂತ್ರಸ್ತರ ನೆರವಿಗೆ ಧಾವಿಸುತ್ತದೆ. ಉಚಿತ ಆಹಾರ, ವಸತಿಗಳ ಸೇವೆಯನ್ನು ಆರಂಭಿಸುತ್ತದೆ. ಸ್ವಯಂಸೇವಕರು ಹಗಲಿರುಳೆನ್ನದೇ ಪ್ರಾಣವನ್ನು ಪಣಕ್ಕಿಟ್ಟು ಸಂತ್ರಸ್ತರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗುತ್ತಾರೆ.
ಇವು ಕೇವಲ ಉದಾಹರಣೆಗಳು. ದೇಶಕ್ಕಾಗಿ ಸಂಘ ನೀಡಿದ ಕೊಡುಗೆಯೇನು..? ಇದು ಪ್ರತಿಯೊಂದು ದೇಶಪ್ರೇಮಿಗೂ ಗೊತ್ತಿರುವ ವಿಷಯ. ದೇಶದ ಇತಿಹಾಸದ ಬಗ್ಗೆ ಅರಿವಿರುವ ಯಾರೂ ಸಂಘದ ವಿರುದ್ಧ ಮಾತಾಡುವುದಿಲ್ಲ. ಆದರೆಂದೂ ಸಂಘ ತನ್ನ ಸಾಧನೆಯನ್ನು ಹೇಳಿಕೊಂಡು ಮೈಮರೆತಿಲ್ಲ. ರಾಜಕೀಯ ಲಾಭಕ್ಕಾಗೂ ಬಳಸಿಕೊಂಡಿಲ್ಲ. ಮಾತೃಭೂಮಿಯ ಸೇವೆಯೇ ಸಂಘದ ನಿಜವಾದ ಉದ್ದೇಶ.