" ಅಲ್ಪವಿದ್ಯೆ ಮಹಾಗರ್ವಿ "
ನಾವು ವಿದ್ಯೆ ಕಲಿತು ವಿದ್ಯಾಂತರಾಗಬೇಕು. ಕಲಿತ ವಿದ್ಯೆ ಪರಿಪೂರ್ಣವಿರಬೇಕು. ನಾಲ್ಕು ದಿನ ತರಗತಿಯಲ್ಲಿ ಕುಳಿತು ನಾನೆಲ್ಲ ಕಲಿತುಬಿಟ್ಟೆ ಎನ್ನುವುದು ಗರ್ವದ ಮಾತಾಗುತ್ತದೆ. ಅದಕ್ಕೆ ಹೇಳುವುದು ಅಲ್ಪ ವಿದ್ಯೆ ಮಹಾಗರ್ವಿ ಎಂದು. ಯಾರೇ ಆಗಲಿ ತಾವು ಕೆಲಸ ಮಾಡುವ ಕ್ಷೇತ್ರವನ್ನು ಕುರಿತಂತೆ ತಕ್ಕಷ್ಟು ಜ್ಞಾನ ಸಂಪಾದಿಸಿಕೊಂಡಿರಬೇಕು. ಅಲ್ಪ ತಿಳುವಳಿಕೆ ಅಪಾಯಕಾರಿ. ವಿಷಯದ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು, ಗೊತ್ತಿಲ್ಲದಿದ್ದರೆ ಬೇರೆಯವರ ಬಳಿ ತಿಳಿದುಕೊಂಡಾದರೂ ಮಾತನಾಡಬೇಕು. ಅಲ್ಲದೆ ಅಲ್ಪವಿದ್ಯೆ ಅಥವಾ ವಿಷಯದ ಬಗ್ಗೆ ಜ್ಞಾನ ಕಡಿಮೆಯಿದ್ದವರು ಮಹಾಜ್ಞಾನಿಯಂತೆ ಬೀಗಲು ಹೋಗಬಾರದು. ಏಕೆಂದರೆ ನಾವೊಂದು ವಿಷಯದ ಕುರಿತು ಸಂಪೂರ್ಣವಾಗಿ ತಿಳಿದುಕೊಂಡು ಮಾತನಾಡುವುದಕ್ಕೂ , ಅಲ್ಪಸ್ವಲ್ಪ ತಿಳಿದು ತನಗೆ ಎಲ್ಲವೂ ಗೊತ್ತಿದೆ ಎಂದು ಬೀಗುವುದಕ್ಕೂ ಬಹಳ ವ್ಯತ್ಯಾಸವಿದೆ. ತುಂಬಿದ ಕೊಡ ತುಳುಕುವುದಿಲ್ಲವೆಂಬ ಗಾದೆಮಾತು ಇದಕ್ಕೆ ಪೂರಕವಾಗಿದೆ. ಪೂರ್ತಿ ತುಂಬಿದ ಕೊಡ ಹೇಗೆ ತುಳುಕುವುದಿಲ್ಲವೋ ಅಂತೆಯೇ ಪೂರ್ಣಜ್ಞಾನಿಯಾದವನು ಎಲ್ಲವೂ ತನಗೆ ಗೊತ್ತಿದೆ ಎಂದು ಎಲ್ಲೂ ಬೀಗುವುದಿಲ್ಲ. ಅಲ್ಪಸ್ವಲ್ಪ ತಿಳಿದವರು ಮಾತ್ರ ಅಹಂಕಾರದಿಂದ ಬೀಗುತ್ತಾರೆ.